ಅತಿ ಹೆಚ್ಚು Pain Killer ಮಾತ್ರೆಗಳ ಸೇವನೆಯಿಂದ ನಮ್ಮ ದೇಹದ ಮೇಲಾಗುವ ಕೆಟ್ಟ ಪರಿಣಾಮಗಳು ಮತ್ತು ಅವುಗಳನ್ನು ನಿಯಂತ್ರಿಸುವುದು ಹೇಗೆ
ಅತಿ ಹೆಚ್ಚು Pain Killer ಮಾತ್ರೆಗಳ ಸೇವನೆಯಿಂದ ನಮ್ಮ ದೇಹದ ಮೇಲಾಗುವ ಕೆಟ್ಟ ಪರಿಣಾಮಗಳು ಮತ್ತು ಅವುಗಳನ್ನು ನಿಯಂತ್ರಿಸುವುದು ಹೇಗೆ
ಮೊದಲಿಗೆ ನಮ್ಮ ದೇಹ ಅನುಭವಿಸುವ ನೋವಿನ ಬಗ್ಗೆ ಕೆಲವು ಮಾಹಿತಿಗಳನ್ನು ತಿಳಿದುಕೊಳ್ಳೋಣ.
- ನೋವು ಎಂಬುದು ನಮ್ಮ ದೇಹಕ್ಕಾಗುವ ಸರ್ವೇ ಸಾಮಾನ್ಯ ಸ್ಥಿತಿಯಾಗಿದೆ. ಮನುಷ್ಯನಿಗೆ ವಯಸ್ಸಾದಂತೆ ನೋವುಗಳು ಹೆಚ್ಚಾಗುತ್ತವೆ. ಅದರಲ್ಲೂ ಪುರುಷರಿಗಿಂತ ಮಹಿಳೆಯರು ನೋವು ಅನುಭವಿಸುವ ಸಾಧ್ಯತೆ ಹೆಚ್ಚು.
- ನೋವು ಎಂಬುದು ಕಡಿಮೆ ನೋವಿನಿಂದ ಹಿಡಿದು ಅತಿ ಹೆಚ್ಚು ನೋವಿನವರಗೆ ಯಾವುದಾದರೂ ಆಗಿರಬಹುದು ಮತ್ತು ಸೌಮ್ಯದಿಂದ ತೀವ್ರವಾಗಿರಬಹುದು . ನೋವು ಒಂದು ಸಂಕೀರ್ಣ ರಕ್ಷಣಾತ್ಮಕ ಕಾರ್ಯವಿಧಾನವಾಗಿದೆ. ಇದು ದೇಹವನ್ನು ಅಪಾಯ ಮತ್ತು ಹಾನಿಯಿಂದ ನಮ್ಮನ್ನು ರಕ್ಷಿಸಲು ನಮಗೆ ಕೊಡುವ ಎಚ್ಚರಿಕೆಯಾಗಿದೆ ಎಂದರೆ ತಪ್ಪಾಗಲಾರದು.
- ದೇಹದ ಕೆಲವು ಭಾಗಗಳು ಹೆಚ್ಚು ನೋವು ಗ್ರಾಹಕಗಳನ್ನು ಹೊಂದಿರುತ್ತವೆ . ಉದಾಹರಣೆಗೆ, ಚರ್ಮವು ಸಾಕಷ್ಟು ಗ್ರಾಹಕಗಳನ್ನು ಹೊಂದಿದೆ ಆದ್ದರಿಂದ ನಿಖರವಾದ ಸ್ಥಳ ಮತ್ತು ನೋವಿನ ಪ್ರಕಾರವನ್ನು ಹೇಳುವುದು ಸುಲಭ. ಕರುಳಿನಲ್ಲಿ ಕಡಿಮೆ ಗ್ರಾಹಕಗಳಿವೆ ಆದ್ದರಿಂದ ಹೊಟ್ಟೆ ನೋವಿನ ನಿಖರವಾದ ಸ್ಥಳವನ್ನು ಗುರುತಿಸಲು ಕಷ್ಟವಾಗುತ್ತದೆ.
- ನೋವಿನ ಪ್ರಕಾರಗಳ ಬಗ್ಗೆ ತಿಳಿದುಕೊಳ್ಳುವುದಾದರೆ, ನಮ್ಮ ದೇಹವು ಎರಡು ರೀತಿಯಲ್ಲಿ ನೋವುಗಳನ್ನು ಅನುಭವಿಸುವುದುಂಟು, ಅವುಗಳೆಂದರೆ ತೀವ್ರವಾದ ನೋವು – ಗಾಯ ಅಥವಾ ವೈದ್ಯಕೀಯ ಶಸ್ತ್ರಚಿಕಿತ್ಸೆಗೆ ಒಳಗಾದ ನೋವು , ಇದು ಕೆಲವು ಸಮಯದ ವರೆಗೆ ಮಾತ್ರ ಇದ್ದು ಸಾಮಾನ್ಯವಾಗಿ ಅಲ್ಪಕಾಲಿಕವಾಗಿರುತ್ತದೆ. ಮತ್ತು ದೀರ್ಘಕಾಲದ ನೋವು – ನಿರೀಕ್ಷಿಸಿದ ಸಮಯವನ್ನು ಮೀರಿ ಮುಂದುವರಿಯುತ್ತದೆ . ಇದು ಸಾಮಾನ್ಯವಾಗಿ 3 ತಿಂಗಳಿಗಿಂತ ಹೆಚ್ಚು ಕಾಲ ಇರುತ್ತದೆ, ಅಥವಾ ವರ್ಷಗಳ ವರೆಗೂ ಮುಂದುವರೆಯಬಹುದು.
- ಇತ್ತೀಚಿನ ದಿನಗಳಲ್ಲಿ ಜನರು ಒಂದು ಸಣ್ಣ ನೋವನ್ನು ಸಹಿಸದೆ ನೋವು ನಿವಾರಕ ಮಾತ್ರೆಗಳ ಮೇಲೆ ಅತಿ ಬೇಗನೆ ಅವಲಂಬಿತರಾಗುತ್ತಿದ್ದಾರೆ, ಕಾರಣವೇನೆಂದರೆ ದಿನೇ ದಿನೇ ನಮ್ಮ ದೇಹ ಅತಿ ಸೂಕ್ಷ್ಮ ವಾಗುತ್ತಿರುವುದು ಮತ್ತು ನಾವು ಸೇವಿಸುವ ಆಹಾರದಲ್ಲಿ ವಿಟಮಿನ್, ಪ್ರೋಟಿನ್, ಕಬ್ಬಿಣಾಂಶದಂತಹ ಇನ್ನಿತರ ಪೋಷಕಾಂಶಗಳು ಕಡಿಮೆಯಾಗುತ್ತಿರುವುದು .
ನೋವು ನಿವಾರಕ (pain killers) ಮಾತ್ರೆಗಳನ್ನು ಪ್ರತಿದಿನ ಮತ್ತು ಹೆಚ್ಚು ದಿನಗಳ ವರೆಗೆ ಸೇವಿಸುವುದರಿಂದ ನಮ್ಮ ದೇಹದ ಮೇಲೆ ಅನೇಕ ಅಡ್ಡ ಪರಿಣಾಮಗಳು (side effects) ಉಂಟಾಗುತ್ತವೆ. ಅಂತಹ ಕೆಲವು ಅಡ್ಡ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳೋಣ.
1. ಮಲಬದ್ಧತೆ
ನೋವು ನಿವಾರಕ ಔಷಧಿಗಳು ಕರುಳಿನ ಮೇಲೆ ಪರಿಣಾಮ ಬೀರುವುದರಿಂದ ಮಲಬದ್ದತೆಗೆ ಕಾರಣವಾಗುತ್ತದೆ. ಮಲಬದ್ದತೆಯು ದೇಹದ ಮೇಲೆ ಅನೇಕ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ ಅವುಗಳೆಂದರೆ ಹಸಿವಾಗದಿರುವುದು, ನಿಶ್ಯಕ್ತಿ, ಕಿರಿಕಿರಿ, ಕೋಪ ಅಥವಾ ಅತೃಪ್ತಿ ಉಂಟಾಗುವುದು, ಹೊಟ್ಟೆ ನೋವು, ವಾಕರಿಕೆ, ಓಣ ಚರ್ಮ, ಅನಾರೋಗ್ಯದ ಭಾವನೆ ಉಂಟಾಗುವುದು ಮುಂತಾದವುಗಳಿಗೆ ಕಾರಣವಾಗಬಹುದು.
2. ವಾಕರಿಕೆ ಮತ್ತು ವಾಂತಿ
ಪ್ರತಿದಿನ ನೋವು ನಿವಾರಕ ಮಾತ್ರೆಗಳ ಬಳಕೆಯು ಸಾಮಾನ್ಯವಾಗಿ ವಾಕರಿಕೆ, ವಾಂತಿ, ಅಜೀರ್ಣ ಮತ್ತು ಹೊಟ್ಟೆಯ ಹುಣ್ಣು ಗಳಂತಹ ಗ್ಯಾಸ್ಟ್ರಿಕ್ ನ ಸಮಸ್ಯೆ ಮತ್ತಿತರ ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು. ಇಂತಹ ಕಾರಣಗಳು ಇನ್ನು ಮುಂದುವರೆದು ರಕ್ತದೊತ್ತಡ, ಹೃದಯದ ವೈಫಲ್ಯಕ್ಕೂ ಕಾರಣವಾಗಬಹುದು. ಆದ್ದರಿಂದ ನೋವು ನಿವಾರಕಗಳನ್ನು ಯಾವಾಗಲೂ ಎಚ್ಚರಿಕೆಯಿಂದ ಮತ್ತು ಸಾಧ್ಯವಾದಷ್ಟು ಮಿತಿಯಲ್ಲಿ ಬಳಸಬೇಕು.
3. ತೂಕಡಿಕೆ
ನೋವು ನಿವಾರಕ ಮಾತ್ರೆಗಳ ಪ್ರಮುಖ ಅಡ್ಡ ಪರಿಣಾಮ ವೆಂದರೆ ತೂಕಡಿಕೆ (drowsiness) ಮತ್ತು ಸುಸ್ತು. ಇದರಿಂದ ನಮ್ಮ ದೇಹ ಚಟುವಟಿಕೆಯಿಂದಿರಲು ಸಾಧ್ಯವಾಗುವುದಿಲ್ಲ. ಇದರ ಪರಿಣಾಮವಾಗಿ ದೇಹದಲ್ಲಿ ಬೇಡವಾದ ಕೊಬ್ಬಿನ ಪ್ರಮಾಣವು ಹೆಚ್ಚಾಗುತ್ತದೆ. ಅಲ್ಲದೆ ರಕ್ತ ಸಂಚಾರಕ್ಕೂ ತೊಂದರೆಯಾಗುತ್ತದೆ.
4. ನರಮಂಡಲದ ಅಸ್ವಸ್ಥತೆ
ನೋವು ನಿವಾರಕಗಳ ನಿರಂತರ ಬಳಕೆಯು ಕೇಂದ್ರ ನರಮಂಡಲದ ಮೇಲೆ ಭಾರಿ ಹಾನಿಯನ್ನುಂಟುಮಾಡುತ್ತದೆ. ನೋವು ನಿವಾರಕಗಳು ನೋವನ್ನು ತಡೆಯಲು ಸಹಾಯ ಮಾಡಲು ಕೇಂದ್ರ ನರಮಂಡಲವನ್ನು ಕುಗ್ಗಿಸುತ್ತವೆ. ಅಲ್ಲದೆ ಗಮನಾರ್ಹವಾಗಿ ನಿಧಾನವಾದ ಉಸಿರಾಟ, ನಿಧಾನವಾದ ದೈಹಿಕ ಪ್ರತಿಕ್ರಿಯೆಗಳು ಮತ್ತು ಅಸ್ಪಷ್ಟವಾದ ಮಾತುಗಳಿಗೆ ಕಾರಣವಾಗಬಹುದು.
5. ಚರ್ಮದ ಅಲರ್ಜಿ
ಕೆಲವು ನೋವು ನಿವಾರಕಗಳ ಹೆಚ್ಚಿನ ಸೇವನೆಯು ಚರ್ಮದ ದದ್ದು, ಚರ್ಮದ ಮೇಲೆ ಕೆಂಪು ಕಲೆಗಳು, ಒಣ ಚರ್ಮ, ತುರಿಕೆ ಮುಂತಾದ ಲಕ್ಷಣಗಳು ಕಂಡು ಬರುತ್ತದೆ.
6. ಮೂತ್ರಪಿಂಡದ ಹಾನಿ
ಹೆಚ್ಚಿನ ಪ್ರಮಾಣದಲ್ಲಿ ಅಥವಾ ದೀರ್ಘಕಾಲದವರೆಗೆ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಮೂತ್ರಪಿಂಡಗಳು ಹಾನಿಯಾಗಬಹುದು ಮತ್ತು ಮೂತ್ರಪಿಂಡಗಳಿಂದಾಗುವ ಹಾನಿಕಾರಕ ಮತ್ತು ವಿಷಯುಕ್ತ ಪದಾರ್ಥಗಳ ಫಿಲ್ಟರಿಂಗ್ ಅಥವಾ ಶುದ್ದಿಗೊಳಿಸುವ ಕಾರ್ಯದ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.ತುಂಬಾ ದಿನಗಳ ವರೆಗೆ ಅಥವಾ ವರ್ಷಗಳ ವರಗೆ ನಿರಂತರವಾಗಿ pain killers ಮಾತ್ರೆಗಳ ಸೇವನೆಯು ದೇಹದ ಅಂಗಗಳ ಕಾರ್ಯ ಕ್ಷಮತೆಯನ್ನು ಕಡಿಮೆ ಮಾಡುವುದಲ್ಲದೆ ಅಂಗಾಂಗಳ ವೈಫಲ್ಯಕ್ಕೂ ಕಾರಣವಾಗುತ್ತದೆ.
ಆದ್ದರಿಂದ ಮಾತ್ರೆಗಳನ್ನು ಹೊರತು ಪಡಿಸಿ ನಿಮ್ಮ ನೋವನ್ನು ನಿಭಾಯಿಸಲು ಇತರ ಪರಿಣಾಮಕಾರಿ ಮಾರ್ಗಗಳನ್ನು ಅಳವಡಿಸಿಕೊಳ್ಳುವುದು ಉತ್ತಮ. ಅಂತಹ ಕೆಲವು ಮಾರ್ಗಗಳು ಮತ್ತು ಕೆಲವು ನಿರ್ವಹಣ ಸೂತ್ರಗಳನ್ನು ಸುಲಭವಾಗಿ ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳಬಹುದು.
ಔಷಧಿಗಳಿಲ್ಲದೆ ನೋವನ್ನು ನಿರ್ವಹಿಸಲು ಕೆಲವು ಮಾರ್ಗಗಳು.
ನೋವನ್ನು ನಿಭಾಯಿಸಲು ಹಲವಾರು ಔಷಧೇತರ ಚಿಕಿತ್ಸೆಗಳು ಲಭ್ಯವಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಚಿಕಿತ್ಸೆಗಳು ಹೆಚ್ಚು ಪರಿಣಾಮಕಾರಿಯಾಗಿವೆ . ಇಂತಹ ಕೆಲವು ಚಿಕಿತ್ಸೆಗಳು ಹೀಗಿವೆ:-
- ಸಾಕಷ್ಟು ನಿದ್ರೆ, ವಿಶ್ರಾಂತಿ ಮತ್ತು ಧ್ಯಾನ.
- ಯೋಗ ಮತ್ತು ಉತ್ತಮ ಗುಣಮಟ್ಟದ ಆಹಾರ ಸೇವನೆ .
- ವ್ಯಕ್ತಿಯು ತನ್ನ ದಿನಚರಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ: ಅಂದರೆ ಸಮಾಜದೊಂದಿಗೆ ಬೆರೆಯುವುದು, ಬೇರೆಯವರಿಗೆ ಸಹಾಯ ಮಾಡುವುದು,ಯಾವುದಾದರೂ ಹವ್ಯಾಸ ರೂಢಿಸಿಕೊಳ್ಳುವುದು, ಪ್ರಕೃತಿಯೊಂದಿಗೆ ಸಮಯ ಕಳೆಯುವುದು, ಪ್ರೇರಣಾತ್ಮಕ Self help ಪುಸ್ತಕಗಳನ್ನು ಓದುವ ಹವ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ಸಕಾರಾತ್ಮಕ ಮನಸ್ಥಿತಿ ಉಂಟಾಗುತ್ತದೆ. ಇದರಿಂದ ಆರೋಗ್ಯ ವೃದ್ದಿಸುತ್ತದೆ.
- ಬಿಸಿ ಮತ್ತು ಕೊಲ್ಡ್ ಥೆರಪಿ – ಊತವನ್ನು ಕಡಿಮೆ ಮಾಡಲು ತಕ್ಷಣವೇ ಐಸ್ ಪ್ಯಾಕ್ ಗಳನ್ನು ಬಳಸಿ. ದೀರ್ಘಕಾಲದ ಸ್ನಾಯು ಅಥವಾ ಕೀಲು ನೋವುಗಳನ್ನು ನಿವಾರಿಸಲು ಬಿಸಿ ನೀರಿನ ಪ್ಯಾಕ್ಗಳು ಉತ್ತಮವಾಗಿವೆ.
- ವಾಕಿಂಗ್, ಸ್ಟ್ರೆಚಿಂಗ್, ಮಿತವಾದ ಏರೋಬಿಕ್ ವ್ಯಾಯಾಮಗಳು ನೋವನ್ನು ಕಡಿಮೆ ಮಾಡಲು ಮತ್ತು ನಿಮ್ಮನ್ನು ಕ್ರಿಯಾಶೀಲವಾಗಿರಿಸಲು ಮತ್ತು ನೋವಿನ ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
- ಆಕ್ಯುಪಂಕ್ಚರ್ – ಸಾಂಪ್ರದಾಯಿಕ ಚೀನೀ ಔಷಧದ ಒಂದು ಅಂಶ. ಅಕ್ಯುಪಂಕ್ಚರ್ ಚರ್ಮದ ಮೇಲೆ ನಿರ್ದಿಷ್ಟ ಬಿಂದುಗಳಲ್ಲಿ ತೆಳುವಾದ ಸೂಜಿಗಳನ್ನು ಸೇರಿಸುವುದನ್ನು ಒಳಗೊಂಡಿರುತ್ತದೆ. ಇದು ದೇಹದೊಳಗೆ ಸಮತೋಲನವನ್ನು ಪುನಃಸ್ಥಾಪಿಸುತ್ತದೆ ಮತ್ತು ನೈಸರ್ಗಿಕ ನೋವು-ನಿವಾರಕ ಸಂಯುಕ್ತಗಳನ್ನು (ಎಂಡಾರ್ಫಿನ್) ಬಿಡುಗಡೆ ಮಾಡುವ ಮೂಲಕ ನೋವುಗಳನ್ನು ಗುಣಪಡಿಸುತ್ತದೆ. ಅಕ್ಯುಪಂಕ್ಚರ್ ದೇಹದಲ್ಲಿನ ನೋವಿನ ತೀವ್ರತೆಯನ್ನು ಕಡಿಮೆ ಮಾಡುವುದಲ್ಲದೆ ದೇಹವು ತನ್ನ ಕಾರ್ಯವನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ.
- ಟ್ರಾನ್ಸ್ಕ್ಯುಟೇನಿಯಸ್ ಎಲೆಕ್ಟ್ರಿಕಲ್ ನರ್ವ್ ಸ್ಟಿಮ್ಯುಲೇಶನ್ (TENS) ಥೆರಪಿ – ಕಡಿಮೆ ವೋಲ್ಟೇಜ್ ವಿದ್ಯುತ್ ಪ್ರವಾಹಗಳ ಎಲೆಕ್ಟ್ರೋಡ್ಗಳು ಚರ್ಮದ ಮೂಲಕ ಹಾದುಹೋಗುತ್ತವೆ, ಈ ಕ್ರಿಯೆಯು ದೇಹದಲ್ಲಾಗುವ ನೋವುಗಳನ್ನು ಕಡಿಮೆ ಮಾಡುತ್ತದೆ.