ಮಕ್ಕಳಿಗೆ ಮನೆಯಲ್ಲಿ ಸಕಾರಾತ್ಮಕ ವಾತಾವರಣ ಸೃಷ್ಠಿಸಲು 7 ಸಲಹೆಗಳು
ಮಕ್ಕಳು ಸಾಕಷ್ಟು ಸಮಯವನ್ನು ಮನೆಯಲ್ಲಿ ಕಳೆಯುತ್ತಾರೆ, ಆದ್ದರಿಂದ ಮನೆಯ ವಾತಾವರಣ ಮಗುವನ್ನು ಯಶಸ್ಸಿನ ಹಾದಿಯಲ್ಲಿ ಕರೆದೊಯ್ಯಲು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮಕ್ಕಳಿಗೆ ಮನೆಯಲ್ಲಿ ಉತ್ತಮ ಮತ್ತು ಸುರಕ್ಷಿತ ವಾತಾವರಣವನ್ನು ಸೃಷ್ಟಿಸುವುದು ಮತ್ತು ಅವರ ದೈಹಿಕ, ಭಾವನಾತ್ಮಕ ಬೆಳವಣಿಗೆಗೆ ಅಗತ್ಯವಾದ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುವುದು ಪ್ರತಿಯೊಬ್ಬ ಪೋಷಕರ ಆಧ್ಯ ಕರ್ತವ್ಯವಾಗಿದೆ. ಮಗುವಿಗೆ ಸಕಾರಾತ್ಮಕ ನಡವಳಿಕೆಗಳನ್ನು ಹೇಳಿಕೊಡುವುದಲ್ಲದೆ ಅವರಿಗೆ ಧನಾತ್ಮಕ ಮಾರ್ಗದರ್ಶನದ ಅಗತ್ಯವಿರುತ್ತದೆ. ಪೋಷಕರಿಂದ ಧನಾತ್ಮಕ, ಸ್ಥಿರವಾದ ಮಾರ್ಗದರ್ಶನವನ್ನು ಮಕ್ಕಳು ಪಡೆದಾಗ ಅವರು ಸಮಾಜದಲ್ಲಿ ಹೇಗೆ ವರ್ತಿಸಬೇಕು ಎಂಬುದನ್ನು ಕಲಿಯುತ್ತಾರೆ. ಮಕ್ಕಳ ಉತ್ತಮ ಕೆಲಸಗಳಿಗೆ ಪ್ರಶಂಸೆ ಮತ್ತು ಉತ್ತೇಜನ ನೀಡುವುದರಿಂದ ಅವರಲ್ಲಿ ಸಕಾರಾತ್ಮಕ ಬೆಳವಣಿಗೆಗೆ ಕಾರಣವಾಗುತ್ತದೆ.
ಈ ಸಕಾರಾತ್ಮಕ ವಿಧಾನವನ್ನು ನಮ್ಮ ಮನೆಯಲ್ಲಿ ಕಾರ್ಯರೂಪಕ್ಕೆ ತರಲು ಕೆಲವು ಸಲಹೆಗಳು ಇಲ್ಲಿವೆ.
ಪೋಷಕರು ತಮ್ಮ ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಂಡು ಮಕ್ಕಳೊಂದಿಗೆ ಸಮಯ ಕಳೆಯುವುದು.
ಇಂದಿನ ಆಧುನಿಕ ಜೀವನಶೈಲಿಯಲ್ಲಿ ಪೋಷಕರಿಗೆ ಕೆಲಸದ ಒತ್ತಡ ಹೆಚ್ಚಾಗಿದೆ ಮತ್ತು ಬಿಡುವಿಲ್ಲದ ಜೀವನ ಶೈಲಿಯಿಂದಾಗಿ ಮಕ್ಕಳೊಂದಿಗೆ ಕಾಲ ಕಳೆಯಲು ಸಮಯ ಸಿಗುತ್ತಿಲ್ಲ. ಇದರಿಂದ ಮಕ್ಕಳಿಗೆ ಒಂಟಿತನ ಹೆಚ್ಚಾಗುತ್ತಿರುವುದರಿಂದ ಅವರು ಫೋನ್ ಮತ್ತು ಟಿ.ವಿ ಗಳ ಮೇಲೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ. ಆದ್ದರಿಂದ ಪೋಷಕರಿಗೆ ಎಷ್ಟೇ ಕೆಲಸದ ಒತ್ತಡವಿದ್ದರೂ ಸ್ವಲ್ಪವಾದರೂ ಗುಣಮಟ್ಟದ ಸಮಯ ನೀಡುವುದರಿಂದ ಅವರೊಂದಿಗೆ ಉತ್ತಮ ಭಾವಾನಾತ್ಮಕ ಸಂಬಂಧ ಬೆಳೆಯುತ್ತದೆ. ನಿಮ್ಮ ಮಕ್ಕಳೊಂದಿಗೆ ಆಟವಾಡುವುದು, ಅವರನ್ನು ಪ್ರೋತ್ಸಾಹಿಸುವುದು ಅವರೊಟ್ಟಿಗೆ ಓದುವುದು ಮತ್ತು ಅವರ ದಿನಚರಿಯ ಬಗ್ಗೆ ಮಾತನಾಡುವ ಮೂಲಕ ಸಕಾರಾತ್ಮಕ ವಾತಾವರಣವನ್ನು ನಿರ್ಮಿಸಬಹುದು.
ಮಕ್ಕಳಿಗೆ ಅವರ ವಯಸ್ಸಿಗೆ ತಕ್ಕಂತ ಕೆಲವು ಜವಾಬ್ದಾರಿಗಳನ್ನು ನೀಡುವುದು.
ಸಣ್ಣ ಪುಟ್ಟ ಜವಾಬ್ದಾರಿಗಳನ್ನು ಮಕ್ಕಳಿಗೆ ನೀಡುವುದರಿಂದ ಅವರಲ್ಲಿ ಸ್ವಾವಲಂಬನೆ ಹೆಚ್ಚಾಗುತ್ತದೆ ಅಲ್ಲದೆ ಮಕ್ಕಳು ಜೀವನದಲ್ಲಿ ಹೊಸ ಕೌಶಲ್ಯಗಳನ್ನು ಕಲಿಯಲು ಆಸಕ್ತಿ ತೋರುತ್ತಾರೆ. ಪೋಷಕರಿಗೂ ಕೆಲಸದ ಒತ್ತಡ ಕಡಿಮೆಯಾಗಿ ಮಕ್ಕಳೊಂದಿಗೆ ಸಮಯ ಕಳೆಯಬಹುದು. ಮಕ್ಕಳು ಅವರ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಿದರೆ ಮಕ್ಕಳನ್ನು ಪ್ರಶಂಸಿಸುವುದಲ್ಲದೆ ಅವರಿಗೆ ನೀಡುವ ಒಂದು ಸಣ್ಣ ಅಪ್ಪುಗೆ, ನಗು ಮತ್ತು ಪ್ರೋತ್ಸಾಹದ ಮಾತುಗಳು ನಿಮ್ಮ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ಪೋಷಕರು ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶಕರಾಗಬೇಕು.
ಮನೆಯೇ ಮೊದಲ ಪಾಠಶಾಲೆ. ಪೋಷಕರು ಮಕ್ಕಳೊಂದಿಗೆ ನಡೆದುಕೊಳ್ಳುವ, ಮಾತಾನಾಡುವ ಮತ್ತು ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ರೀತಿ ನೀತಿಗಳನ್ನು ಮಕ್ಕಳು ತಮಗರಿವಿಲ್ಲದಂತೆ ಅನುಸರಿಸುತ್ತಾರೆ. ನಿಮ್ಮ ಒಳ್ಳೆಯ ಜೀವನಶೈಲಿ, ಶಿಸ್ತು, ಉತ್ತಮ ಕೆಲಸಗಳು ಮತ್ತು ಸಕಾರಾತ್ಮಕ ಮನೋಬಾವನೆ ಮಕ್ಕಳಿಗೂ ಪ್ರೇರಣೆಯಾಗುತ್ತದೆ. ಇದರಿಂದ ಮಕ್ಕಳು ಕೂಡ ತಮ್ಮ ಜೀವನದಲ್ಲಿ ಶಿಸ್ತನ್ನು ಕಲಿಯಲು ಅನುಕೂಲ ವಾಗುತ್ತದೆ.
ಪೋಷಕರಲ್ಲಿ ಪರಸ್ಪರ ಪ್ರೀತಿ ಮತ್ತು ಗೌರವ ವಿರಲಿ
ಮನೆಯಲ್ಲಿ ಪಾಲಕರು ತಮ್ಮಲ್ಲಿ ಗೌರವ ಮತ್ತು ಪ್ರೀತಿಯಿಂದ ಮಾತನಾಡುವುದನ್ನು ಅಳವಡಿಸಿಕೊಳ್ಳಬೇಕು. ಇದು ಮಕ್ಕಳ ಮೇಲೆ ಭಾವನಾತ್ಮಕವಾಗಿ ಪ್ರಭಾವ ಬೀರುವುದರಿಂದ ಅವರು ಕೂಡ ಗುರು ಹಿರಿಯರೊಂದಿಗೆ ಹೇಗೆ ಪ್ರೀತಿ ಮತ್ತು ಗೌರವದಿಂದ ವರ್ತಿಸಬೇಕು ಎಂಬುದನ್ನು ಬಾಲ್ಯದಿಂದಲೇ ಕಲಿಯುತ್ತಾರೆ. ಪೋಷಕರು ತಮ್ಮ ತಮ್ಮಲ್ಲಿ ಜಗಳವಾಡುವುದು ಮತ್ತು ಒಬ್ಬರನ್ನೊಬ್ಬರು ಹೀಯಾಳಿಸುವುದರಿಂದ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಮನೆಯಲ್ಲಿ ಧಾರ್ಮಿಕ ಆಚರಣೆಗಳು ಇರಲಿ
ಪ್ರತಿದಿನ ಮಕ್ಕಳು ಮನೆಯಲ್ಲಿ ದೇವರೆ ಪೂಜೆ, ಧ್ಯಾನ ಮಾಡುವುದು ಮತ್ತು ದೇವರ ನಾಮಗಳನ್ನು ಹೇಳುವುದನ್ನು ಪ್ರೋತ್ಸಾಹಿಸಬೇಕು. ನಮ್ಮ ಭಾರತೀಯ ಸಂಸ್ಕ್ರತಿಯಲ್ಲಿರುವ ಹಬ್ಬಗಳನ್ನು ಉತ್ತಮ ರೀತಿಯಲ್ಲಿ ಆಚರಿಸುವುದರಿಂದ ಮತ್ತು ಆ ಹಬ್ಬಗಳಲ್ಲಿ ಮಾಡುವ ವಿಶೇಷ ತಿಂಡಿ ತಿನಿಸುಗಳನ್ನು ತಯಾರಿಸುವುದರಿಂದ ನಮ್ಮ ಮಕ್ಕಳಲ್ಲಿ ಧಾರ್ಮಿಕ ಭಾವನೆಗಳ ಬಗ್ಗೆ ಆಸಕ್ತಿ ಬೆಳೆಯಲು ಸಹಕಾರಿಯಾಗುತ್ತದೆ. ಮಕ್ಕಳು ನಮ್ಮ ಸಂಸ್ಕ್ರತಿಯನ್ನು ಗೌರವಿಸಲು ಮತ್ತು ಉಳಿಸಿ ಬೆಳೆಸಲು ಆಸಕ್ತಿ ತೋರುತ್ತಾರೆ.
ಮನೆಯಲ್ಲಿ ಧೂಮಪಾನ ಮತ್ತು ಮಧ್ಯಪಾನ ನಿಷಿದ್ದ ಮಾಡುವುದು.
ನಿಮ್ಮ ಕೆಲಸದ ಒತ್ತಡಗಳನ್ನು ನಿಭಾಯಿಸಲು ನೀವು ಧೂಮಪಾನ ಮತ್ತು ಮಧ್ಯಪಾನ ಮಾಡುವುದರಿಂದ ನಿಮ್ಮ ಮಕ್ಕಳ ಮತ್ತು ನಿಮ್ಮ ಇಡೀ ಕುಟುಂಬದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ನಿಮ್ಮ ಮಕ್ಕಳ ಸಕಾರಾತ್ಮಕ ಬೆಳವಣಿಗೆಯು ಕುಂಠಿತಗೊಳ್ಳುವುದಲ್ಲದೆ ಮಕ್ಕಳು ತಮ್ಮ ಜೀವನದಲ್ಲಿ ಸಾಧಿಸಬೇಕೆಂದಿರುವ ಸಾಧನೆಗಳ ಬಗ್ಗೆ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಅವರೂ ಕೂಡ ಕಾಲಕ್ರಮೇಣ ಇದೇ ದುಷ್ಚಟಗಳನ್ನು ಕಲಿಯಬಹುದು. ಜೀವನದಲ್ಲಿ ಯಾವುದೇ ಒತ್ತಡ ಬಂದರೂ ಕೆಟ್ಟ ಚಟಗಳಿಗೆ ಬಲಿಯಾಗದೆ ಒತ್ತಡವನ್ನು ನಿಭಾಯಿಸಲು ಬೇಕಾದ ಧೈರ್ಯ ಮತ್ತು ಬುಧ್ಧಿಶಕ್ತಿಯ ಬಗ್ಗೆ ತಮ್ಮ ಮಕ್ಕಳಲ್ಲಿ ಅರಿವು ಮೂಡಿಸುವುದು ಪೋಷಕರ ಕರ್ತವ್ಯವಾಗಿದೆ.
ಶುಚಿಯಾದ ಮನೆಯ ವಾತಾವರಣ
ಮನೆಯ ವಾತಾವರಣವು ಮಗುವಿಗೆ ಪ್ರೀತಿ, ಭಾವನಾತ್ಮಕ ಸಂಬಂಧ, ಕಲಿಕೆ ಮತ್ತು ಹೊಸ ಅನ್ವೇಷಣೆಗೆ ಅವಕಾಶಗಳನ್ನು ಒದಗಿಸುವ ಮೂಲಕ ಆರೋಗ್ಯಕರ ಬೆಳವಣಿಗೆ ಮತ್ತು ಮೆದುಳಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಮನೆ ಚಿಕ್ಕದಾಗಿದ್ದರೂ ಚೊಕ್ಕವಾಗಿ ಶುಚಿಯಾಗಿಡುವುದರಿಂದ ನಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಮನೆಯಲ್ಲಿ ಸುವಾಸನೆ ಭರಿತ ತೈಲ, ಒಂದೊಳ್ಳೆಯ ಸಂಗೀತದ ಧ್ವನಿ, ಅಲ್ಲದೆ ಮನೆಯ ಹೊರಗೂ ಮತ್ತು ಒಳಗೂ ಸುಂದರವಾದ ಸಸ್ಯಗಳು ಸ್ವಚ್ಛವಾದ ಗಾಳಿ, ಬೆಳಕು ಇವೆಲ್ಲವೂ ಕೂಡ ಮಕ್ಕಳಲ್ಲಿ ಸಕಾರಾತ್ಮಕ ಭಾವನೆಗಳನ್ನು ಬೆಳೆಸುತ್ತದೆ.