ಕೆಮ್ಮು ನೆಗಡಿಗೆ ಮನೆ ಮದ್ದು # SIMPLE HOME REMEDIES FOR COUGH AND COLD
ಕೆಮ್ಮು ನೆಗಡಿಗೆ ಮನೆ ಮದ್ದು # SIMPLE HOME REMEDIES FOR COUGH AND COLD
ಸಾಮಾನ್ಯವಾಗಿ ಋತುಮಾನಗಳಿಂದ ಆಗುವ ಬದಲಾವಣೆಯು ನಮ್ಮ ದೇಹದ ಮೇಲೆ ಸಾಕಷ್ಟು ಪರಿಣಾಮಗಳನ್ನು ಬೀರುತ್ತದೆ. ಋತುಮಾನ ಬದಲಾವಣೆಗಳಿಂದ ನಮ್ಮ ದೇಹ ಹೆಚ್ಚು ಸೋಂಕಿಗೆ ಒಳಗಾಗುತ್ತದೆ. ನೆಗಡಿ ಮತ್ತು ಕೆಮ್ಮುಗಳಂತಹ ಅಲರ್ಜಿಗಳು ಸಾಮಾನ್ಯ ಕಾಯಿಲೆಗಳಾಗಿದ್ದು, ಇವುಗಳಿಗೆ ಆ್ಯಂಟಿಬಯೋಟಿಕ್ ಗಳ ಅವಶ್ಯಕತೆ ಇರುದಿಲ್ಲ. ನಮ್ಮ ದೇಹದ ಪ್ರತಿರೋಧಕ ಶಕ್ತಿಯೇ ಸಾಕಾಗಿರುತ್ತದೆ. ಆ್ಯಂಟಿಬಯೋಟಿಕ್ ಗಳು ನಮ್ಮ ದೇಹದ ಮೇಲೆ ಅಡ್ಡಪರಿಣಾಮ ಮತ್ತು ಹಾನಿಗಳನ್ನು ಉಂಟುಮಾಡುತ್ತವೆ. ಸಾಮಾನ್ಯ ಕೆಮ್ಮು ನೆಗಡಿಗೆ ವೈದ್ಯರು ಆ್ಯಂಟಿಬಯೋಟಿಕ್ ಗಳನ್ನು ಕೊಡುವುದು ತಪ್ಪು ಎಂದು ವೈದ್ಯಕೀಯ ಮಂಡಳಿ ಕೂಡ ತಿಳಿಸಿದೆ.
ಸಣ್ಣ ಪುಟ್ಟ ನೆಗಡಿ ಮತ್ತು ಕೆಮ್ಮುಗಳಂತಹ ಕಾಯಿಲೆಗಳಿಗೆಲ್ಲಾ ಆಸ್ಪತ್ರೆಗೆ ಹೋಗುವ ಬದಲು ನಮ್ಮ ಅಡುಗೆ ಮನೆಯಲ್ಲಿ ಸಿಗುವ ಕೆಲವು ಪದಾರ್ಥಗಳಿಂದ ಮನೆ ಮದ್ದು ಮಾಡಿಕೊಳ್ಳಬಹುದು
1. ಸೂಪ್ಗಳ ಸೇವನೆ
ತರಕಾರಿ ಸೂಪ್ ಗಳು ವಿಟಮಿನ್ ಮತ್ತು ಪೋಷಕಾಂಶಗಳಿಂದ ಸಮೃದ್ದವಾಗಿರುತ್ತದೆ. ಇಂತಹ ಸೂಪ್ಗಳು ಹಗುರವಾದ ಆಹಾರವಾಗಿರುತ್ತದೆ, ಆದ್ದರಿಂದ ಇದನ್ನು ಸೇವಿಸುವುದರಿಂದ ನಮ್ಮ ಜೀರ್ಣಕ್ರಿಯೆಗೆ ಸುಲಭವಾಗುತ್ತದೆ. ಶೀತವಿದ್ದ ಸಮಯದಲ್ಲಿ ಊಟ ತಿಂಡಿಯ ಕಡೆ ನಮಗೆ ಆಸಕ್ತಿ ಇರುವುದಿಲ್ಲ ಇಂತಹ ಸಮಯದಲ್ಲಿ ತರಕಾರಿಯಿಂದ ಮಾಡಿದ ಸೂಪ್ಗೆ ಕಾಳು ಮೆಣಸಿನ ಪುಡಿ ಹಾಕಿ ಸೇವಿಸುವುದರಿಂದ ನಾಲಗೆಗೂ ರುಚಿ ದೇಹಕ್ಕೂ ಆರಾಮದಾಯಕ.
2. ಬೆಳ್ಳುಳ್ಳಿಯ ಉಪಯೋಗ
ಬೆಳ್ಳುಳ್ಳಿ ಶೀತ ಮತ್ತು ಕೆಮ್ಮಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಕಟುವಾದ ವಾಸನೆಯಿಂದಾಗಿ ಅನೇಕರು ಬೆಳ್ಳುಳ್ಳಿಯನ್ನು ಸೇವಿಸುವುದಿಲ್ಲ ಆದರೆ ಇದು ನಿಮ್ಮ ಅಡುಗೆಮನೆಯಲ್ಲಿರುವ ಆರೋಗ್ಯಕರ ಆಹಾರ ಪದಾರ್ಥಗಳಲ್ಲಿ ಒಂದಾಗಿದೆ. ಬೆಳ್ಳುಳ್ಳಿಯು ಆಂಟಿವೈರಲ್, ಆಂಟಿಬ್ಯಾಕ್ಟೀರಿಯಲ್ ಮತ್ತು ಉರಿಯೂತದ( Inflammation) ಗುಣಲಕ್ಷಣಗಳನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿರುತ್ತದೆ. ಇದನ್ನು ನಮ್ಮ ಅಡುಗೆಯಲ್ಲಿ ಬಳಸುವುದರಿಂದ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
3. ಶುಂಠಿ ಟೀ
ಶುಂಠಿಯು ಒಂದು ಸೂಪರ್ಫುಡ್ ಆಗಿದ್ದು, ವಾಕರಿಕೆ, ಶೀತ, ಜ್ವರ ಮತ್ತು ಕೆಮ್ಮು ಸೇರಿದಂತೆ ಹಲವಾರು ಕಾಯಿಲೆಗಳಿಂದ ಪರಿಹಾರವನ್ನು ನೀಡುತ್ತದೆ. ಶುಂಠಿ ಟೀ ಕೆಮ್ಮನ್ನು ಕಡಿಮೆ ಮಾಡುತ್ತದೆ. ಒಂದು ಸಣ್ಣ ತುಂಡು ಶುಂಠಿಯನ್ನು ಜೇನುತುಪ್ಪದೊಂದಿಗೆ ಜಗಿಯುವುದರಿಂದ ಗಂಟಲಿನ ನೋವು ಮತ್ತು ಕಿರಿಕಿರಿ ಶಮನ ವಾಗುತ್ತದೆ.
4. ಉಪ್ಪು ನೀರಿನ ಬಳಕೆ
ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದು (gargle) ಶೀತ ಮತ್ತು ಕೆಮ್ಮಿಗೆ ಅತ್ಯಂತ ಜನಪ್ರಿಯ ಮತ್ತು ನೈಸರ್ಗಿಕ ಪರಿಹಾರಗಳಲ್ಲಿ ಒಂದಾಗಿದೆ. ಗಂಟಲು ನೋವು ಎಂದರೆ ಸೋಂಕು ಆಗಿದೆ ಎಂದರ್ಥ. ಅವು ಬ್ಯಾಕ್ಟೀರಿಯಾ ಆಗಿರಬಹುದು ಅಥವಾ ವೈರಸ್ ಆಗಿರಬಹುದು. ಗಂಟಲಿನ ಭಾಗದಲ್ಲಿ ಇವುಗಳ ಸಂತತಿ ಹೆಚ್ಚಾಗುತ್ತಾ ಹೋದಂತೆ ಗಂಟಲಲ್ಲಿ ಊತ ಬಂದು ಕಫ ಶೇಕರಣೆ ಯಾಗುತ್ತದೆ. ಇಂತಹ ಸಂಧರ್ಭದಲ್ಲಿ ಉಪ್ಪು ನೀರು ರಾಮ ಬಾಣವಾಗಿ ಕೆಲಸ ಮಾಡುತ್ತದೆ.
5. ಬಿಸಿ ನೀರಿನ ಹಬೆ ತೆಗೆದು ಕೊಳ್ಳುವುದು
ಶೀತವನ್ನು ಕಡಿಮೆ ಮಾಡಿಕೊಳ್ಳಲು ಅನುಸರಿಸುವ ಸರಳ ಪರಿಹಾರವೆಂದರೆ ಹಬೆಯನ್ನು ತೆಗೆದುಕೊಳ್ಳುವುದು. ಶೀತವಾದ ಸಮಯದಲ್ಲಿ ಮಲಗಿದ್ದಾಗ ಮೂಗು ಕಟ್ಟಿದಂತಾಗಿ ಸರಿಯಾಗಿ ನಿದ್ದೆ ಮಾಡಲು ಆಗುವುದಿಲ್ಲ ಇಂತಹ ಸಂದರ್ಭದಲ್ಲಿ ಬಿಸಿ ನೀರಿನ ಹಾವಿ ತೆಗೆದುಕೊಳ್ಳುವುದರಿಂದ ಕಟ್ಟಿದ ಮೂಗಿನ ಹಾದಿಗಳನ್ನು ತೆರವುಗೊಳಿಸಿ ಸುಲಭವಾಗಿ ಉಸಿರಾಡಲು ಸಹಾಯ ಮಾಡುತ್ತದೆ. ಬಿಸಿ ನೀರಿನ ಬೆಚ್ಚಗಿನ ಗಾಳಿಯು ಉಸಿರಾಟದ ಮಾರ್ಗಕ್ಕೆ ತೇವಾಂಶವನ್ನು ಸೇರಿಸುತ್ತದೆ ಮತ್ತು ಕಫದ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೆಗಡಿ ಉಪಶಮನ ಮಾಡಲು ಉತ್ತಮ ಮನೆ ಮದ್ದು ಪುದಿನ ಎಲೆ ಅಥವಾ ನೀಲಗಿರಿ ತೈಲವನ್ನು ಬಿಸಿನೀರಿಗೆ ಹಾಕಿ ಹಬೆ ತೆಗೆದುಕೊಳ್ಳುವುದು.
6. ಜೇನುತುಪ್ಪದ ಸೇವನೆ
ಜೇನುತುಪ್ಪವು ಅತ್ಯಂತ ಸಾಮಾನ್ಯವಾದ ಭಾರತೀಯ ಮನೆಮದ್ದುಗಳಲ್ಲಿ ಒಂದಾಗಿದೆ. ಕೆಮ್ಮು ಮತ್ತು ಗಂಟಲು ನೋವಿಗೆ ಸುಲಭ ಮತ್ತು ಪರಿಣಾಮಕಾರಿ ರೀತಿಯಲ್ಲಿ ಕೆಲಸ ಮಾಡುತ್ತದೆ. ಅತಿಯಾದ ಕೆಮ್ಮನ್ನು ನಿವಾರಿಸಲು ಬಿಸಿನೀರಿನೊಂದಿಗೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ತೆಗೆದುಕೊಳ್ಳಬಹುದು. ಜೇನುತುಪ್ಪದೊಂದಿಗೆ ಶುಂಟಿ ಪೇಸ್ಟ್ ಅನ್ನು ಮಿಶ್ರಣ ಮಾಡಿ ತೆಗೆದುಕೊಳ್ಳುವುದರಿಂದ ಶುಂಟಿಯಲ್ಲಿರುವ ಉಷ್ಣ ಗುಣ ಕಫವನ್ನು ಕರಗಿಸಲು ಸಹಾಯ ಮಾಡುತ್ತದ ಹಾಗೂ ಜೇನುತುಪ್ಪವು ಗಂಟಲಿನ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ.
7. ಹಾಲು ಮತ್ತು ಅರಿಶಿನ
ಶೀತ ಮತ್ತು ಕೆಮ್ಮಿಗೆ ಹಳೆಯ ಮತ್ತು ನೈಸರ್ಗಿಕ ಪರಿಹಾರವೆಂದರೆ ಹಾಲು ಮತ್ತು ಅರಿಶಿನದ ಉಪಯೋಗ. ಮಕ್ಕಳು ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರೆ ಹಾಲಿಗೆ ಹರಿಶಿನವನ್ನು ಹಾಕಿ ಕೊಡುವುದು ಉತ್ತಮ. ಅರಿಶಿನವು ಉತ್ತಮ ನಂಜುನಿರೋಧಕ ( non toxic) ಗುಣಗಳನ್ನು ಹೊಂದಿರುವುದರಿಂದ ವೈರಲ್ ಸೋಂಕುಗಳಿಗೆ ಚಿಕಿತ್ಸೆ ನೀಡುವ ಉತ್ತಮ ಆಹಾರವಾಗಿದೆ ಮತ್ತು ಹಾಲಿನಲ್ಲಿ ವಿಟಮಿನ್ ಡಿ ಸಮೃದ್ಧವಾಗಿರುವುದರಿಂದ ಇದು ಪ್ರತಿರಕ್ಷಣಾ ವ್ಯವಸ್ಥೆಗೆ ಉತ್ತೇಜನ ನೀಡುತ್ತದೆ.
8. ಬಹಳಷ್ಟು ಬಿಸಿ ದ್ರವಗಳನ್ನು ಸೇವಿಸಿ.
ನೆಗಡಿ ಅಥವಾ ಕೆಮ್ಮು ಆದಾಗ ಆದಷ್ಟು ವಿವಿಧ ರೀತಿಯ ಕಷಾಯಗಳು, ಮೆಣಸಿನ ಸಾರು, ಬಿಸಿ ನೀರು, ಅರಿಶಿನ ಅಥವಾ ಶುಂಠಿ ಹಾಕಿದ ಬಿಸಿ ನೀರು, ರಸಂಗಳು, ಸೂಪ್ ಗಳು ಮುಂತಾದ ಬಿಸಿ ದ್ರವಗಳನ್ನು ಸೇವಿಸುವುದರಿಂದ ದೇಹದಲ್ಲಿ ನೀರಿನ ಅಂಶ ಹೆಚ್ಚುತ್ತದೆ. ಇದರಿಂದ ಬೇಗ ಕಫ ಕಡಿಮೆಯಾಗಿ ಕೆಮ್ಮಿನಿಂದ ಉಪಶಮನ ಸಿಗುತ್ತದೆ.
9. ನಿದ್ದೆ ಮಾಡುವುದು ಅವಶ್ಯಕ
ಕೆಮ್ಮು ನೆಗಡಿ ಜ್ವರಗಳಲ್ಲಿ ದೇಹಕ್ಕೆ ವಿಶ್ರಾಂತಿಯ ಅವಶ್ಯಕತೆ ಇರುತ್ತದೆ. ಶೀತ ಮತ್ತು ನೆಗಡಿಯನ್ನು ಗುಣಪಡಿಸಲು ನಿದ್ರೆ ಅತ್ಯಗತ್ಯ. ನಿದ್ರಿಸುವಾಗ ದೇಹವು ಸೈಟೊಕೀನ್ಗಳೆಂಬ ಪ್ರೋಟೀನ್ಗಳನ್ನು ಉತ್ಪಾದಿಸುತ್ತದೆ ಇದು ಸೋಂಕು ಮತ್ತು ಉರಿಯೂತದ ವಿರುದ್ಧ ಹೋರಾಡಲು ಮುಖ್ಯವಾಗಿದೆ ಎಂದು ಸಂಶೋಧನೆಗಳು ಹೇಳುತ್ತವೆ.
10. ಪುದಿನಸೊಪ್ಪಿನ ಬಳಕೆ
ಪುದಿನ ಎಲೆಗಳ ರಸದ ಸೇವನೆಯು ನೈಸರ್ಗಿಕವಾಗಿಯೇ ಮೂಗು, ಗಂಟಲು, ಶ್ವಾಸನಾಳ ಮತ್ತು ಶ್ವಾಸಕೋಶದ ದಟ್ಟಣೆಯನ್ನು ತೆರವುಗೊಳಿಸಿ ಉಸಿರಾಟಕ್ಕೆ ಅನುಕೂಲವಾಗುವಂತೆ ಮಾಡುತ್ತದೆ. ಪುದೀನಾ ಎಲೆಗಳು ಮೆಂಥಾಲ್ ಎಂಬ ಸಂಯುಕ್ತವನ್ನು ಹೊಂದಿರುವುದರಿಂದ ಇದು ಕೆಮ್ಮುವಿಕೆಯಿಂದ ಆಗುವ ಗಂಟಲಿನ ಕಿರಿ ಕಿರಿ ಯನ್ನು ತಪ್ಪಿಸುತ್ತದೆ.
11. ನೀಲಗಿರಿ ತೈಲ
ಶೀತ ಮತ್ತು ಕೆಮ್ಮನ್ನು ಶಮನ ಮಾಡಲು ತೈಲದ ಉಪಯೋಗ ಉತ್ತಮ. ಏಕೆಂದರೆ ನೀಲಗಿರಿ ತೈಲವು ದೇಹದಲ್ಲಿರುವ ಮ್ಯೂಕಸ್ ಮತ್ತು ಕಫವನ್ನು ಒಡೆಯಲು ಮತ್ತು ಶ್ವಾಸನಾಳವನ್ನು ತೆರೆಯಲು ಸಹಾಯ ಮಾಡುವ ಮೂಲಕ ನೈಸರ್ಗಿಕವಾಗಿ ಶೀತ ಮತ್ತು ಕೆಮ್ಮು ನಿರೋಧಕವಾಗಿ ಕೆಲಸ ಮಾಡುತ್ತದೆ. ಅತಿಯಾದ ಶೀತದಿಂದ ಬಳಲುತ್ತಿರುವವರು ಈ ಎಣ್ಣೆಯನ್ನು ಬೆನ್ನು ಮತ್ತು ಎದೆ ಭಾಗಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಎದೆ ಭಾಗದಲ್ಲಿ ಶೇಕರಣೆ ಯಾಗಿರುವ ಕಫವನ್ನು ಕರಗಿಸಿ ಸುಲಭವಾಗಿ ಉಸಿರಾಡಲು ಸಹಾಯ ಮಾಡುತ್ತದೆ.
12. ತುಳಸಿ
ನಮಗೆಲ್ಲರಿಗೂ ತಿಳಿದಿರುವಂತೆ ಭಾರತೀಯ ಸಂಪ್ರದಾಯದಲ್ಲಿ ಪ್ರತಿನಿತ್ಯ ಪೂಜಿಸಲ್ಪಡುವ ತುಳಸಿಯು ಸಾಕಷ್ಟು ಆರೋಗ್ಯ ಪ್ರಯೋಜನಗಳು ಮತ್ತು ಔಷಧೀಯ ಗುಣಗಳನ್ನು ಹೊಂದಿರುವ ಶಕ್ತಿಯುತ ಮೂಲಿಕೆಯಾಗಿರುವುದಲ್ಲದೆ ಅನಾರೋಗ್ಯವನ್ನು ಸಹ ಗುಣಪಡಿಸುತ್ತದೆ. ನಮ್ಮ ಉಸಿರಾಟವನ್ನು ಉತ್ತಮಗೊಳಿಸುತ್ತದೆ. ತುಳಸಿ ಕಷಾಯವು ಶೀತ ಮತ್ತು ಕೆಮ್ಮಿಗೆ ಚಿಕಿತ್ಸೆ ನೀಡಲು ಬಳಸುವ ಜನಪ್ರಿಯ ಮನೆಮದ್ದು ಮತ್ತು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ತುಳಸಿಯು ಅನೇಕ ಉತ್ತಮ ಗುಣಗಳನ್ನು ಹೊಂದಿದೆ ಮತ್ತು ಆಂಟಿಬ್ಯಾಕ್ಟೀರಿಯಲ್, ಆಂಟಿಫಂಗಲ್ ಮತ್ತು ನಂಜುನಿರೋಧಕ ಗುಣಗಳನ್ನು ಹೊಂದಿದೆ. ಖಾಲಿ ಹೊಟ್ಟೆಯಲ್ಲಿ ತುಳಸಿ ಕಷಾಯವನ್ನು ತಗೆದುಕೊಳ್ಳುವುದರಿಂದ ಶೀತ ಮತ್ತು ಕೆಮ್ಮನ್ನು ಗುಣಪಡಿಸುವ ಪ್ರಕ್ರಿಯೆಯ ವೇಗವನ್ನು ದ್ವಿಗುಣಗೊಳಿಸುತ್ತದೆ ಮತ್ತು ಬೇಗನೆ ನಿವಾರಿಸುತ್ತದೆ.
ನಮಗೆ ಕಾಯಿಲೆ ಬಂದಾಗ ಮಾತ್ರ ಇಂತಹ ಪದಾರ್ಥಗಳನ್ನು ಉಪಯೋಗಿಸಿದರೆ ಸಾಲದು ದಿನ ನಿತ್ಯ ನಮ್ಮ ಅಡುಗೆಗಳಲ್ಲಿ ಉಪಯೋಗಿಸುವುದರಿಂದ ಅಡುಗೆಯ ಸ್ವಾದವನ್ನು ಹೆಚ್ಚಿಸುವುದಲ್ಲದೆ ಹಲವು ಸೋಂಕುಗಳ ವಿರುದ್ಧ ನಮ್ಮನ್ನು ರಕ್ಷಣೆ ಮಾಡುತ್ತದೆ.
ಶೀತ ಮತ್ತು ಕೆಮ್ಮು ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಯುವುದು ಹೇಗೆ
ಶೀತವನ್ನು ಒಬ್ಬರಿಂದ ಒಬ್ಬರಿಗೆ ಹರಡುವ ಅಪಾಯವನ್ನು ಕಡಿಮೆ ಮಾಡಲು ಈ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಸಾಮಾನ್ಯ ಶೀತದಿಂದ ರಕ್ಷಿಸಿಕೊಳ್ಳಬಹುದು.
1. ಕೈಗಳನ್ನು ಆಗಾಗ್ಗೆ ಹ್ಯಾಂಡ್ ವಾಶ್ ನಿಂದ ತೊಳೆಯಿರಿ.
2. ಅನಾರೋಗ್ಯದಿಂದ ಬಳಲುತ್ತಿರುವ ಜನರಿಂದ ದೂರವಿರಿ.
3. ತೊಳೆಯದ ಕೈಗಳಿಂದ ನಿಮ್ಮ ಕಣ್ಣು, ಮೂಗು ಮತ್ತು ಬಾಯಿಯನ್ನು ಮುಟ್ಟಬೇಡಿ.
4. ಕೆಮ್ಮು ನೆಗಡಿಯಿಂದ ಬಳಲುತ್ತಿದ್ದರೆ ಆದಷ್ಟು ಮನೆಯಲ್ಲಿಯೇ ಇರಿ.
5. ಮಕ್ಕಳೊಂದಿಗೆ ನಿಕಟ ಸಂಪರ್ಕವನ್ನು ಮಾಡಬೇಡಿ.